ಅಜೀಲಿಯನ್ ಸಂಸ್ಕೃತಿ
	ದಕ್ಷಿಣ ಫ್ರಾನ್ಸ್, ಮಧ್ಯ ಯೂರೋಪ್, ಬೆಲ್ಜಿಯಂ ಮತ್ತು ಉತ್ತರ ಬ್ರಿಟನ್ ಪ್ರದೇಶಗಳಲ್ಲಿ ಹರಡಿದ್ದ ಸೂಕ್ಷ್ಮ ಶಿಲಾಯುಗದ ಸಂಸ್ಕೃತಿ. ಫ್ರಾನ್ಸಿನ ಪಿರನೆಸ್ ಪರ್ವತ ಪ್ರದೇಶದಲ್ಲಿರುವ ಮಜ್-ದ-ಅಜಿûಲ್ ಎಂಬ ಸ್ಥಳದಲ್ಲಿ ಮೊದಲು ಗುರುತಿಸಲ್ಪಟ್ಟಿದ್ದರಿಂದ ಅಜೀಲಿಯನ್ ಎಂಬ ಹೆಸರು ರೂಢವಾಯಿತು. ಹಳೆಯ ಶಿಲಾಯುಗದ ಮ್ಯಾಗ್ಡಲೀಯನ್ ಅವಶೇಷಗಳ ಮೇಲ್ಪದರಗಳಲ್ಲಿ ಇದರ ಅವಶೇಷಗಳು ಸಿಕ್ಕುವುದರಿಂದ ಇದರ ಕಾಲ ಕ್ರಿ.ಪೂ. 8,000 ಇರಬಹುದೆಂದು ಹೇಳಬಹುದು. ಬೇಟೆಯಿಂದಲೇ ಜೀವಿಸುತ್ತಿದ್ದ ಈ ಜನ, ಬಹು ಸಣ್ಣ ಶಿಲಾಯುಧಗಳನ್ನು ಎಲುಬಿನ ಆಯುಧಗಳನ್ನು ಮೀನಿನ ಬೇಟೆಗಾಗಿ ಕೆಂಪು ಜಿಂಕೆಯ ಕೊಂಬಿನಿಂದ ಮಾಡಿದ ಹಾರ್ಪೂನ್ ಎಂಬ ಆಯುಧವನ್ನು ಉಪಯೋಗಿಸುತ್ತಿದ್ದರು. ಈ ಕಾಲದಲ್ಲಿ ಪಶುಪಾಲನೆ ಬಳಕೆಯಿರಲಿಲ್ಲವಾದರೂ ನಾಯಿ ಮಾತ್ರ ಪಳಗಿದ ಪ್ರಾಣಿಯಾಗಿದ್ದಿತು. ಚುಕ್ಕೆಗಳು, ಉದ್ದ ಅಡ್ಡ ಗೆರೆಗಳು, ವೃತ್ತಗಳು, ಮುಂತಾದ ಕಪ್ಪು ಬಣ್ಣದ ಚಿಹ್ನೆಗಳಿಂದ ಚಿತ್ರಿತವಾದ ಸಣ್ಣ ಗುಂಡುಕಲ್ಲುಗಳು ಅವಶೇಷಗಳೊಡನೆ ದೊರಕುತ್ತದೆ. ಬವೇರಿಯದ ಆಫ್ನೆಟ್‍ನಲ್ಲಿ ದೊರಕಿರುವ ಈ ಕಾಲದ ತಲೆಬುರುಡೆಗಳ ಗುಡ್ಡೆಗಳು. ಈ ಜನರು ಆಚರಿಸುತ್ತಿದ್ದ ಶವಸಂಸ್ಕಾರ ರೀತಿಯ ಬಗ್ಗೆ ಮಾಹಿತಿ ನೀಡುತ್ತವೆ.					
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ